Sunday 7 February 2021

ಡಾ. ಎಂ. ಮಲ್ಲೇಶ ಇವರಿಗೆ ಶ್ರೀಮತಿ ಅನಿತಾ ಕೌಲ್ ನೆನಪಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

 




ಆತ್ಮೀಯರೇ ನಮ್ಮ ಶಾಲೆಯ ಶಿಕ್ಷಕರಾದ ಶ್ರೀಯುತ ಡಾ. ಎಂ. ಮಲ್ಲೇಶ ರಂಗ ಕಲಾ ಶಿಕ್ಷಕರು. ಸರ್ಕಾರಿ ಪ್ರೌಢಶಾಲೆ ಚಳಮಟ್ಟಿ ಕಲಘಟಗಿ(ತಾ) ಧಾರವಾಡ ಜಿಲ್ಲೆ ಇವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ಇವರು ಕೊಡಮಾಡುವ2020-21 ನೇ ಸಾಲಿನ ಶ್ರೀಮತಿ ಅನಿತಾ ಕೌಲ್ ನೆನಪಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು ಆ ಪ್ರಶಸ್ತಿಯನ್ನು   ದಿನಾಂಕ  7-2-2021 ರಂದು ಬೆಂಗಳೂರಿನಲ್ಲಿ  ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗಿದೆ.  ಇವರಿಗೆ  ಮುಖ್ಯೋಪಾಧ್ಯಾಯರು ಶಾಲಾ ಸಿಬ್ಬಂದಿ ವರ್ಗ. ಹಳ್ಳಿಯ ಗ್ರಾಮಸ್ಥರು ಅಭಿನಂದಿಸಿದ್ದಾರೆ 

ಡಾ. ಎಂ ಮಲ್ಲೇಶ್ ಇವರು ತುಮಕೂರು ಜಿಲ್ಲೆಯ ಗಡಿನಾಡು ಪ್ರಾಂತ್ಯವಾದ ಪಾವಗಡ ತಾಲೂಕಿನ ಯರಪಾಳ್ಯ ಗ್ರಾಮದವರಾಗಿದ್ದು. ಪ್ರಸ್ತುತ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಚಳಮಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ರಂಗ ಶಿಕ್ಷಕರಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ರಂಗಭೂಮಿ ಮತ್ತು ಶಿಕ್ಷಣ ವಿಷಯದ ಮೇಲೆ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜ್ಯಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮಾಡಿದ್ದಾರಲ್ಲದೆ 35ಕ್ಕೂ ಹೆಚ್ಚು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನ ಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದಾರೆ ಅಲ್ಲದೆ ಶಾಲೆಯ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ನಾಟಕ ವಿಷಯದಲ್ಲಿ  ಎಂ.ಎ ಪದವಿ. ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಡಿಪ್ಲೋಮೋ ಇನ್ ಥಿಯೇಟರ್ ಆರ್ಟ್ಸ್ ಪದವಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ಕಲೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ದಾರೆ ಅಲ್ಲದೆ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಲ್ಲಿ ಡಾ.ಕೆ ರಾಮಕೃಷ್ಣಯ್ಯ ಪ್ರಾಧ್ಯಾಪಕರು ಇವರ ಮಾರ್ಗದರ್ಶನದಲ್ಲಿ   "ಕನ್ನಡ ರಂಗಪ್ರಯೋಗಗಳು" ಎಂಬ ವಿಷಯದ ಮೇಲೆ ಸಂಶೋಧನೆ ಕೈಗೊಂಡು ಪ್ರಬಂಧ ಮಂಡಿಸಿ ಪಿಹೆಚ್‌ಡಿ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ.
ಕಲಾವಿದರಾಗಿ ಸುಮಾರು 25ಕ್ಕೂ ಹೆಚ್ಚು ರಂಗಪ್ರಯೋಗಗಳಲ್ಲಿ ಅಭಿನಯಿಸಿದ್ದು. ಹದಿನೈದಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಹೆಸರಾಂತ ನಿರ್ದೇಶಕರ ಅಡಿಯಲ್ಲಿ ಕೆಲಸ ಮಾಡಿದ ಅನುಭವ ಇರುವವರು ಸಂಘಟಕರಾಗಿ. ತಂತ್ರಜ್ಞರಾಗಿ. ರಂಗ ಶಿಬಿರಗಳ ನಿರ್ದೇಶಕರಾಗಿ. ರಾಜ್ಯಮಟ್ಟದ ತರಬೇತಿಯಲ್ಲಿ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ರಾಜ್ಯದ ಹಲವು ಶಿಕ್ಷಕರಿಗೆ ಕಲಾ ತರಬೇತಿಯನ್ನು ನೀಡಿ ಪಠ್ಯವನ್ನು  ಸುಲಭವಾಗಿ ಬೋಧಿಸಲು ಕಾರಣರಾಗಿದ್ದಾರೆ. ಇವರು ಹಳ್ಳಿಯ ಸಾಂಸ್ಕೃತಿಕ ವಾತಾವರಣದಲ್ಲಿ ಇಡಲು ಸಮುದಾಯವನ್ನು ಜಾಗೃತಿಗೊಳಿಸಿ ಪರಿವರ್ತನಾ ರಂಗ ಕಲಾ ಕೇಂದ್ರವನ್ನು ಸ್ಥಾಪನೆ ಮಾಡಿ ಹಳ್ಳಿಯ ಕಲಾವಿದರನ್ನು ವಿದ್ಯಾರ್ಥಿಗಳನ್ನು ರಾಜ್ಯ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನ ಮಾಡುವ ಹಂತಕ್ಕೆ ಶ್ರಮಿಸಿದ್ದಾರೆ.
ತಾನು ಕಾರ್ಯನಿರ್ವಹಿಸುತ್ತಿರುವ ಪ್ರೌಢಶಾಲೆಯಿಂದ ಸುಮಾರು 20 ನಾಟಕಗಳ ಪ್ರದರ್ಶನಗೊಂಡಿದ್ದು ಅದರಲ್ಲಿ ಮೂರು ನಾಟಕಗಳು ಇಲಾಖೆ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಪ್ರತಿಭಾಕಾರಂಜಿಯಲ್ಲಿ ರಾಜ್ಯಮಟ್ಟದಲ್ಲಿ ಪ್ರದರ್ಶನ 10 ವಿಜ್ಞಾನ ನಾಟಕಗಳಲ್ಲಿ ಮೂರು ನಾಟಕಗಳು ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ವಿಭಾಗ ಮಟ್ಟದಲ್ಲಿ ಪ್ರದರ್ಶನ ನೀಡುವಲ್ಲಿ ಕಾರಣೀಭೂತರಾಗಿದ್ದಾರೆ.
ಹೀಗೆ ಎಲೆಮರೆ ಕಾಯಿ ಆಗಿದ್ದುಕೊಂಡು ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕವಾಗಿ ಜಾಗೃತಿ ಮೂಡಿಸುತ್ತಾ ಕಲಾ ಕಾಯಕ ಮಾಡುತ್ತಿರುವ ಇವರು ತಮ್ಮ ಶಾಲೆಯಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಆಸ್ಥೆಯಿಂದ ಕಾಳಜಿಯಿಂದ ಸಲ್ಲಿಸಿದ ಇದುವರೆಗಿನ ಸಾರ್ಥಕ ಸೇವೆ  ಹಾಗೂ ಗ್ರಾಮೀಣ ಭಾಗದ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿರುವ ಸೇವೆಯನ್ನು ಗುರುತಿಸಿ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ  ಡಾ. ಎಂ ಮಲ್ಲೇಶ್ ರವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ಇವರು 2020 - 21 ನೇ ಸಾಲಿನ ಶ್ರೀಮತಿ ಅನಿತಾ ಕೌಲ್  ನೆನಪಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿರುವುದು ನಾಟಕ ಶಿಕ್ಷಕವರ್ಗ ಹೆಮ್ಮೆಯಿಂದ ಬೀಗುವ ವಿಚಾರವಾಗಿದೆ. ಸದರಿಯವರ ಸಾಧನೆ ಇನ್ನೂ ಎತ್ತರಕ್ಕೆ ಏರಲಿ. ಅವರು ಇನ್ನಷ್ಟು ಉತ್ತಮ ಯೋಜನೆಗಳನ್ನು ರೂಪಿಸಿ ಮುಂದೆ ಇನ್ನೂ ಎತ್ತರಕ್ಕೆ ಏರಲಿ. ನಮ್ಮ ನಾಟಕ ಶಿಕ್ಷಕರು ನಾಡಿನ ಹೆಮ್ಮೆ ಎಂದು ಹೇಳುತ್ತಾ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು


ಗುರುರಾಜ್  ಎಲ್

ರಂಗ ಕಲಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಜಹಗೀರಗುಡದೂರು
 ಕೊಪ್ಪಳ  ಜಿಲ್ಲೆ